ಕ್ಲಾಷಿಯಸ್, ರುಡಾಲ್ಫ್ ಜೀಲಿಯಸ್ ಈಮ್ಯಾನ್ಯುಎಲ್
1822-1888. ಜರ್ಮನಿ ದೇಶದ ಭೌತವಿಜ್ಞಾನಿ, ಜನನ 1822ನೆಯ ಇಸವಿ ಜನವರಿ 2 ರಂದು. ಭೌತವಿಜ್ಞಾನದಲ್ಲಿ ಉನ್ನತ ಪದವೀಧರನಾದ ಈತನಿಗೆ ಬರ್ಲಿನ್ ನಗರದ ರಾಯಲ್ ಆರ್ಟಿಲರಿ ಮತ್ತು ಎಂಜಿನಿಯರಿಂಗ್ ಸ್ಕೂಲಿನಲ್ಲಿ ಪ್ರಾಧ್ಯಾಪಕತ್ವ ಲಭಿಸಿತು (1850). ಮುಂದೆ 1855ರಲ್ಲಿ ಜûುರಿಕ್ ಪಾಲಿಟೆಕ್ನಿಕ್ ಮತ್ತು ಜûುರಿಕ್ ವಿಶ್ವವಿದ್ಯಾಲಯಗಳಲ್ಲೂ 1867ರಲ್ಲಿ ವುಜ್ರ್ûಬರ್ಗಿನಲ್ಲಿಯೂ ಪ್ರಾಧ್ಯಾಪಕನಾಗಿ ಕೆಲಸಮಾಡಿ 1869ರಲ್ಲಿ ಬಾನಿನಲ್ಲಿ ಪ್ರಾಧ್ಯಾಪಕನಾಗಿ ಸೇರಿ ತನ್ನ ಮರಣದವರೆಗೂ ಅಲ್ಲಿಯೇ ಇದ್ದ.

ಕ್ಲಾಷಿಯಸ್ ಹೆಸರು ಪಡೆದದ್ದು ತಾತ್ತ್ವಿಕ ಭೌತವಿಜ್ಞಾನಿಯಾಗಿ. ಅಣುಭೌತಶಾಸ್ತ್ರದಲ್ಲಿ ಈತ ಹೆಚ್ಚಿನ  ಅಧ್ಯಯನ ನಡೆಸಿದ್ದಾನೆ. ಕಾರ್ನೋ ತತ್ತ್ವವನ್ನು ಬೇರೊಂದು ರೀತಿಯಲ್ಲಿ ನಿರೂಪಿಸಿ ಉಷ್ಣಗತಿಶಾಸ್ತ್ರವನ್ನು ಒಂದು ನಿಷ್ಕøಷ್ಟ ವಿಜ್ಞಾನವನ್ನಾಗಿ ಬೆಳೆಸಿದವ ಈತನೆ. ಕ್ಲಾಷಿಯಸನ ಹೆಸರುವಾಸಿಯಾದ ಉಷ್ಣಗತಿಶಾಸ್ತ್ರದ ಎರಡನೆಯ ನಿಯಮದ ನಿರೂಪಣೆ ಹೀಗಿದೆ : ತಣ್ಣಗಿರುವ ಕಾಯದಿಂದ ಬಿಸಿಯಾಗಿರುವ ಕಾಯದ ಕಡೆಗೆ ಉಷ್ಣ ತನ್ನಷ್ಟಕ್ಕೇ ಹರಿಯಲಾರದು. ಇದರ ಫಲಿತಾಂಶಗಳನ್ನು ಹಬೆಯಂತ್ರದ ಸಿದ್ಧಾಂತದ ಬೆಳೆವಣಿಗೆಯಲ್ಲಿ ಉಪಯೋಗಿಸಲಾಗಿದೆ. ಎಂಟ್ರೊಪಿಯ ಪರಿಕಲ್ಪನೆಯನ್ನು ಬಹುವಾಗಿ ಒತ್ತಿ ಹೇಳುವುದರ ಮೂಲಕ ಹಬೆಯಂತ್ರದ ಸಿದ್ಧಾಂತವನ್ನು ಬೆಳೆಸಿದ್ದಾನೆ.

ಗತಿಸಿದ್ಧಾಂತವನ್ನು ಆಧರಿಸಿ ಅನಿಲಗಳ ಅಣುಚಲನ ಸಿದ್ಧಾಂತವನ್ನು ಈತ ಬೆಳೆಸಿದ. ಈ ಸಿದ್ಧಾಂತದಲ್ಲಿ ಅಣುವಿನ ಸರಾಸರಿ ಮುಕ್ತಪಥವನ್ನು (ಮೀನ್ ಫ್ರೀ ಪಾತ್) ಲೆಕ್ಕಾಚಾರ ಹಾಕಿದ. ವಿದ್ಯುಕ್ಷೇತ್ರ ಪ್ರಭಾವಕ್ಕೆ ಒಳಗಾದ ವಿದ್ಯುದ್ವಿಭಜನೀಯಗಳಲ್ಲಿ ಅಣುಗಳಿಂದ ಅಣುಗಳಿಗೆ ಪರಮಾಣುಗಳು ವಿನಿಮಯಗೊಳ್ಳುವುದೆಂಬ ಅಂಶವನ್ನು ತಿಳಿಸಿದವನೂ ಈತನೆ. ಈ ಅಂಶದ ಆಧಾರದ ಮೇಲೆ ಅರ್ಹೀನಿಯಸ್ ಎಂಬ ವಿಜ್ಞಾನಿ ವಿದ್ಯುದ್ವಿಭಜನೀಯ ವಿಯೋಜನಾ ಸಿದ್ದಾಂತವನ್ನು ಬೆಳೆಸಿದ (ಥಿಯೊರಿ ಆಫ್ ಎಲೆಕ್ಟ್ರೋಲೈಟಿಕ್ ಅಸೋಸಿಯೇಷನ್). ಕ್ಲೇಪ್‍ಯಾರ್ನ್ ಎಂಬ ವಿಜ್ಞಾನಿ 1834ರಲ್ಲಿ ತಿಳಿಸಿದ್ದ ಬಾಷ್ಪಗುಪ್ತೋಷ್ಣ ಮತ್ತು ಒತ್ತಡಕ್ಕಿರುವ ಸಂಬಂಧದ ಸಮೀಕರಣವನ್ನು ಕ್ಲಾಷಿಯಸ್ 1850ರಲ್ಲಿ ಸೈದ್ಧಾಂತಿಕವಾಗಿ ಕಂಡುಹಿಡಿದ. ಈ ಸಮೀಕರಣವನ್ನು ಕ್ಲಾಷಿಯಸ್-ಕ್ಲೇಪಿರಾನ್ ಸಮೀಕರಣವೆಂದು ಕರೆಯುವರು.

ಕ್ಲಾಷಿಯಸ್ 1888 ನೆಯ ಇಸವಿ ಆಗಸ್ಟ್ 24ರಂದು ಬಾನ್ ನಗರದಲ್ಲಿ ಗತಿಸಿದ.          (ಪಿ.ವಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ